ಸಾತ್ರ್ರೆ, ಜೀನ್‍ಪಾಲ್
	ಫ್ರಾನ್ಸ್‍ನ ಅಸ್ತಿತ್ವವಾದದ ತತ್ತ್ವಜ್ಞಾನಿ, ಲೇಖಕ. ಇವನು ತನ್ನ ಅಭಿಪ್ರಾಯಗಳನ್ನು ತನ್ನ ಕಾದಂಬರಿಗಳು, ನಾಟಕಗಳು, ಸಣ್ಣಕಥೆಗಳಲ್ಲದೇ, ತಾತ್ತ್ವಿಕ ಚಿಂತನೆಗಳಲ್ಲಿ ವ್ಯಕ್ತಪಡಿಸಿದ್ದಾನೆ.

	ವಸ್ತುಗಳ ನಗ್ನ ಅಸ್ತಿತ್ವವು, ವಿಶೇಷವಾಗಿ ತನ್ನದೇ ಅಸ್ತಿತ್ವ ಅವನನ್ನು ಬಹಳವಾಗಿ ಆಕರ್ಷಿಸಿತು. ಏಕೆಂದರೆ, ಯಾವುದೇ ಆಗಲಿ ಅಸ್ತಿತ್ವವಾಗಿರಲು ಯಾವುದೇ ಕಾರಣಗಳು ಕಂಡುಬರುವುದು ಕಾಣುವುದಿಲ್ಲ. ಇವನ ಮೊದಲ ಕಾದಂಬರಿ ನಾಸಿಯಾ.

	ಇವನ ಪ್ರಮುಖ ತಾತ್ತ್ವಿಕ ಕಾರ್ಯವಾದಂತಹ ಬೀಯಿಂಗ್ ಅಂಡ್ ನಥಿಂಗ್-1943 ರಲ್ಲಿ ಪರಿಸರ ಹಾಗೂ ಅಸ್ತಿತ್ವತೆಯ ಅಥವಾಜೀವಿಗಳ ರಚನೆಯನ್ನು ಕಂಡುಹಿಡಿದಿದ್ದಾನೆ. ಇವನ ಹೇಳಿಕೆಯೆಂದರೆ, ಮನುಷ್ಯನ ಅಸ್ತಿತ್ವತೆ, ಯಾವುದನ್ನು ಇವನು “ತನಗಾಗಿಯೇ ಇರುವ” ಎಂದು ಕರೆದಿದ್ದಾನೆಯೋ ಅದು ಟೇಬಲ್ ಎಂಬಂತಹ ನಿರ್ಜೀವ ವಸ್ತುವಿನ ಅಸ್ತಿತ್ವಕ್ಕಿಂತಲೂ ಹೆಚ್ಚಾಗಿ ಬುಡಮಟ್ಟದಲ್ಲೇ ವ್ಯತ್ಯಾಸವಿದೆ ಎಂದಿದ್ದಾನೆ. ಸಾತ್ರ್ರೆಯ ಪ್ರಕಾರ ಕೇವಲ ಮಾನವನ ಅಸ್ತಿತ್ವ ಮಾತ್ರವೇ ತನ್ನ ಬಗ್ಗೆ ಹಾಗೂ ಇನ್ನಿತರ ವಸ್ತುವಿನ ಬಗ್ಗೆ ಅರಿವನ್ನು ಉಳ್ಳದ್ದಾಗಿದೆ.

	ಇವನು ವಾದಿಸುವುದರಂತೆ, ನಿರ್ಜೀವ ವಸ್ತುಗಳು ಸಾಮಾನ್ಯವಾಗಿ ಅವು ಹೇಗಿವೆಯೋ, ಹಾಗೆಯೇ ಇರುತ್ತವೆ. ಹೀಗಾಗಿ, ಮನುಷ್ಯರು ತಾವು ಏನು ಇಚ್ಛಿಸುತ್ತಾರೋ ಅದರಂತಿರುತ್ತಾರೆ. ಮನುಷ್ಯ ಹೇಡಿಯಲ್ಲ, ಮೇಜು ಕೇವಲ ಮೇಜಿನಂತೆ ಎಂಬ ಸರಳ ಮಾತಿನಂತೆ, ಮನುಷ್ಯ ಹೇಡಿಯಾಗುವುದು ಕೇವಲ ಅವನ ಇಚ್ಛೆಯಿಂದ (ಆಯ್ಕೆಯಿಂದ). ಮೇಜಿನಂತೆ, ಮನುಷ್ಯ ಯಾವುದೇ ನಿರ್ದಿಷ್ಟ ಪಾತ್ರ ಅಥವಾ “ಸಾರ” (ಸತ್ತ್ವ) ನಾಗಲ್ಲ. ಪ್ರಾಥಮಿಕವಾಗಿ ಜನರು ಜೀವಿಗಳಾಗಿ ಅಸ್ತಿತ್ತ್ವದಲ್ಲಿದ್ದು, ಅವರದೇ ಪಾತ್ರ (ಜೀವನ) ಅಥವಾ ಸತ್ತ್ವವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಹಾಗಾಗಿ, ತನ್ನ “ಎಕ್ಸಿಸ್‍ಟೆನ್ಷಿಯಲಿಸಮ್ ಮತ್ತು ಹ್ಯುಮನಿಸಮ್” ಎಂಬ ಪ್ರಬಂಧದಲ್ಲಿ ಅಸ್ತಿತ್ತ್ವ ಎನ್ನುವುದು ಸಿದ್ಧಾಂತ ಎಂದು ಪ್ರತಿಪಾದಿಸಿದ್ದಾನೆ. 

	ಮನುಷ್ಯರು ಸಂಪೂರ್ಣವಾಗಿ ಸ್ವತಂತ್ರರು ಎಂಬುದನ್ನು ಸಾತ್ರ್ರೆ ನಂಬಿದ್ದ. ಆದರೆ ಅವರು ಈ ಸ್ವಾತಂತ್ರ್ಯವನ್ನು ಗುರುತಿಸಿಕೊಳ್ಳಲು ಹಾಗೂ ಅವರದೇ ನಡತೆಯಿಂದ ಪೂರ್ಣ ಜವಾಬ್ದಾರಿಯನ್ನು ಒಪ್ಪಿಕೊಳ್ಳಲು ಹೆದರುತ್ತಾರೆ. ಏಕೆಂದರೆ ಅಂತಹ ಸ್ವಾತಂತ್ರ್ಯ ತೊಡಕಾಗುತ್ತದೆ. ಹಾಗಾಗಿ, ಜನರು ತಮ್ಮ ವಾಸ್ತವವಾದ ಸಂದರ್ಭದ ಬಗ್ಗೆ ತಾವೇ ಮೋಸ ಮಾಡಿಕೊಳ್ಳಲು (ಹೋಗಲು) ಹವಣಿಸುತ್ತಾರೆ. 

	ಈತ ಸಿಗ್ಮಂಡ್ ಫ್ರಾಯ್ಡ್‍ನ “ಮನುಷ್ಯನ ನಡವಳಿಯ ಮನೋವಿಶ್ಲೇಷಣಾತ್ಮಕ ಸಿದ್ಧಾಂತ ವನ್ನು ವಿಮರ್ಶಿಸಿ ತನ್ನದೇ “ಎಕ್ಸಿಸ್‍ಟೆನ್ಷಿಯಲ್, ಸೈಕೋ ಅನಾಲಿಸಿಸ್” ನ್ನು ಹೊರತಂದ. 

	ಸಾತ್ರ್ರೆ ಹೇಳಿದಂತೆ “ಮನುಷ್ಯ ಒಬ್ಬ ಉಪಯೋಗವಿಲ್ಲದ ಆಕಾಂಕ್ಷಿ”. ಈ ಅಭಿಪ್ರಾಯವನ್ನು ಈತನು ಪೂರ್ಣವಾಗಿ ಸ್ವ-ಸಂತೋಷ ಹೊಂದಿರುವ ಜೀವಿಗಳಲ್ಲಿ ಗುರುತಿಸಿದ್ದು, ಅವರು ದೇವರ  ಬಗೆಗಿನ ಸಾಂಪ್ರದಾಯಿಕ ನಂಬಿಕೆಯನ್ನು ಹೊಂದಿದ್ದು ತಮ್ಮ ಅಸ್ತಿತ್ವಕ್ಕೆ ತಾವೇ ಕಾರಣವಾಗಿದ್ದಾರೆ, ಆದರೆ ದೇವರು ಪ್ರಾಯಶಃ ಅಸ್ತಿತ್ವದಲ್ಲಿಯೇ ಇಲ್ಲವೆನಿಸುತ್ತದೆ. ತನ್ನ “ಕ್ರಿಟಿಕ್ ಆಫ್ ಡಯಲೆಕ್ಟಿಕಲ್ ರೀಸನ್” ನಲ್ಲಿ ಸಾತ್ರ್ರೆ ಮಾಕ್ರ್ಸಿಸಂ ರಚನೆ ಎಂದು ತಿಳಿದಿದ್ದ, ರಾಜಕೀಯ ಹಾಗೂ ಸಾಮಾಜಿಕ ಸಿದ್ಧಾಂತಗಳನ್ನು ಬರೆದಿದ್ದಾನೆ.

	ಸಾತ್ರ್ರೆಯ ನಾಟಕಗಳಿವು ದ ಫ್ಲೈಸ್ (1943), ನೋ ಎಕ್ಸಿಟ್ (1944), ಡರ್ಟಿ ಹ್ಯಾಂಡ್ಸ್ (1948), ದ ಕಂಡೆಮನ್ಡ್ ಆಫ್ ಅಲ್‍ಟೋನಾ (1959). ಕಾದಂಬರಿಗಳಿವು. ದ ರೋಡ್ಸ್ ಆಫ್ ಫ್ರೀಡಮ್, ದ ಏಜ್ ಆಫ್ ರೀಸನ್ (1945), ದ ರಿಪ್ರೀವ್ (1945) ಹಾಗೂ ಟ್ರಬಲ್ಡ್ ಸ್ಲೀಪ್ (1949) ತನ್ನ ಮನೋವಿಶ್ಲೇಷಣಾತ್ಮಕ ಸಿದ್ಧಾಂತಗಳನ್ನು ತನ್ನ ಆತ್ಮ ಕಥನಗಳಾದ ಬೋದಿಲೇರ್ (1947), ಸೈಂಟ್ ಜೆನೆಟ್ (1953) ಹಾಗೂ ಫ್ಲಾಬರ್ಟ್-1971 ನಲ್ಲಿ ತಿಳಿಸಿದ್ದಾನೆ. ವಡ್ರ್ಸ್ (1963) ಎಂಬುದು ಇವನ ಯೌವ್ವನದ ದಿನಗಳ ಆತ್ಮಕಥನವಾಗಿದೆ.

	ಈತ ಪ್ಯಾರಿಸ್‍ನಲ್ಲಿ ಜನಿಸಿದ. ಇವನು ಎಕೋಲ್‍ನಾರ್‍ಮೇಲ್ ಸುಪೀರಿಯರ್‍ನಲ್ಲಿ ವ್ಯಾಸಂಗ ಮಾಡಿದ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ (1939-1945) ಫ್ರೆಂಚ್ ಸೈನ್ಯದಲ್ಲಿದ್ದು ಹೋರಾಡಿದ್ದಲ್ಲದೇ, ಫ್ರೆಂಚ್ ವಿರೋಧ ಚಳವಳಿಯಲ್ಲಿ ಭಾಗವಹಿಸಿದ. ಈತ “ಲೆಸ್ ಟೆಂಪ್ಸ್ ಮಾರ್ಡನ್ಸ್” ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿ (1945) ಅದರ ಸಂಪಾದಕನಾಗಿ ಕಾರ್ಯ ನಿರ್ವಹಿಸಿದ. 1964ರಲ್ಲಿ ಇವನು ಸಾಹಿತ್ಯ ಸಾಧನೆಗಾಗಿ ನೊಬೆಲ್ ಪಾರಿತೋಷಕವನ್ನು ನೀಡಲಾಯಿತು. ಆದರೆ ಅದನ್ನು ಅಂಗೀಕರಿಸಲು ನಿರಾಕರಿಸಿದ.	
					
				(ಜಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ